ರಾಜಕೀಯದಲ್ಲಿ ಭಾವಸಾರ ಬಂಧುಗಳ ಮತಗಳೂ ನಿರ್ಣಾಯಕ : ಶೈಲೇಶ್ ನಾಝರೆ ಅಶೋಕ್
ಗುರುವಂದನಾ ಸಮಾರಂಭ ಹಾಗೂ ರಕ್ತದಾನ ಶಿಬಿರದಲ್ಲಿ ಕಿವಿಮಾತು

ತುಮಕೂರು : ಇತ್ತೀಚಿನ ದಿನಗಳಲ್ಲಿ ಭಾವಸಾರ ಕ್ಷತ್ರಿಯ ಸಮಾಜವು ಸದೃಢವಾಗುತ್ತಿದ್ದು, ಎಲ್ಲಾ ಜಿಲ್ಲೆಗಳಲ್ಲಿಯೂ ಭಾವಸಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾವುದೇ ಒಬ್ಬ ವ್ಯಕ್ತಿ ರಾಜಕೀಯದಲ್ಲಿ ಹೆಚ್ಚಿನ ಮತಗಳನ್ನು ಗಳಿಸಿ ಗೆಲುವು ಸಾಧಿಸುವಲ್ಲಿ ಭಾವಸಾರ ಬಂಧುಗಳ ಮತಗಳು ಹೆಚ್ಚಿನ ಪ್ರಾಶಸ್ತ್ರ್ಯ ಪಡೆಯಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಮ್ಮ ಜನಾಂಗದ ಎಲ್ಲರೂ ಒಂದಾಗಿ ಉತ್ತಮ ಅಭ್ಯರ್ಥಿಯನ್ನು ಚುನಾಯಿಸುವ ಮೂಲಕ ನಮ್ಮ ಸಮಾಜಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಪಡೆಯಬೇಕಿದೆ ಎಂದು ಜನಸ್ಪಂದನಾ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರೂ ಆದ ಶೈಲೇಶ್ ನಾಝರೆ ಅಶೋಕ್ ರವರು ಕಿವಿಮಾತು ಹೇಳಿದರು.
ತುಮಕೂರು ನಗರದ ಪಾಂಡುರಂಗ ನಗರದ ಶ್ರೀ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಭಾವಸಾರ ಯುವ ಬ್ರಿಗೇಡ್, ಭಾವಸಾರ ಕ್ಷತ್ರಿಯ ಸಮಾಜ ಹಾಗೂ ಸಂಜೀವಿನಿ ರಕ್ತನಿಧಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಇಂಜಿನಿಯರ್ಸ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನ ಮಹಾದಾನವಾಗಿದ್ದು, ಇಂದು ನಾವು ನೀವು ನೀಡುವ ರಕ್ತದಿಂದ ಒಂದು ಜೀವವನ್ನು ಉಳಿಸಬಹುದು. ಇಂತಹ ಮಹತ್ವದ ಕೆಲಸವನ್ನು ಭಾವಸಾರ ಯುವ ಬ್ರಿಗೇಡ್ ವತಿಯಿಂದ ವಿದ್ಯಾರ್ಥಿಗಳು ಹಾಗೂ ಸಮಾಜದ ಬಂಧುಗಳನ್ನು ಒಗ್ಗೂಡಿಸಿ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ನಮ್ಮ ಸಮಾಜದ ಬಂಧುಗಳು ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಕಷ್ಟದ ಜೀವನ ಸಾಗಿಸುವ ಮೂಲಕ ಕೋವಿಡ್ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಅದೇ ರೀತಿ ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸುವ ಮೂಲಕ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಾವು ಆರೋಗ್ಯವಾಗಿದ್ದಲ್ಲಿ ಮಾತ್ರ ಆರೋಗ್ಯವಂತ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಕರೆ ನೀಡಿದರು.
ನಮ್ಮ ಸಮಾಜದ ಬಂಧುಗಳು ನಮ್ಮ ಮಕ್ಕಳಿಗೆ ನಮ್ಮ ಹಿಂದಿನ ಆಚಾರ-ವಿಚಾರಗಳನ್ನು ಕಲಿಸಬೇಕು. ಪೋಷಕರು ತಮ್ಮ ಮಕ್ಕಳನ್ನು ದೇವಾಲಯಗಳಿಗೆ ಕರೆ ತರುವ ಮೂಲಕ ನಮ್ಮ ಸಂಪ್ರದಾಯದ ಕುರಿತು ಬೆಳಕು ಚೆಲ್ಲಬೇಕಿದೆ. ಮಕ್ಕಳು ನಮ್ಮ ಧಾರ್ಮಿಕ ಕರ‍್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕಿದೆ. ನಾವೆಲ್ಲಾ ನಮ್ಮ ನಿತ್ಯ ಜೀವನದ ಜಂಜಾಟದ ನಡುವೆಯೂ ನಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ರಾಜಕೀಯವಾಗಿಯೂ ನಾವೆಲ್ಲಾ ಬೆಳೆಯಬೇಕಿದೆ ಎಂದರು.
ಇದೇ ವೇಳೆ ಜನಸ್ಪಂದನಾ ಪಾರ್ಟಿ ರಾಜ್ಯಾಧ್ಯಕ್ಷರು ಹಾಗೂ ಭಾವಸಾರ ಕ್ಷತ್ರಿಯ ಸಮಾಜದ ರಾಜ್ಯ ಮುಖಂಡರೂ ಆದ ಮಹಾದೇವ್ ರಾವ್ ವರ್ಣೆರವರು ಮಾತನಾಡಿ, ಯಾವುದೇ ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ಹುದ್ದೆಗೇರಲು ಗುರುಗಳ ಪಾತ್ರ ಅಪಾರವಾದುದು. ಗುರುಗಳು ತಮ್ಮ ವಿದ್ಯಾರ್ಥಿಗಳಿಗೆ ಉತ್ತಮ ನೀತಿ, ಸಂಸ್ಕಾರವನ್ನು ಬೆಳೆಸಿದಲ್ಲಿ ಮಾತ್ರ ಉತ್ತಮ ವ್ಯಕ್ತಿ, ವ್ಯಕ್ತಿತ್ವ ನಿರ್ಮಾಣವಾಗಲಿದೆ. ನಮ್ಮ ಹಿಂದೂ ಸಮಾಜದಲ್ಲಿ ತಂದೆ-ತಾಯಿಯನ್ನು ಬಿಟ್ಟರೆ ಗುರುವಿಗೆ ನಂತರದ ಸ್ಥಾನವನ್ನು ನೀಡಲಾಗಿದೆ. ಇಂತಹ ಗುರುಗಳನ್ನು ಗುರ್ತಿಸಿ ಅವರುಗಳ ಸೇವೆಯನ್ನು ಸ್ಮರಿಸಿ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಭಾವಸಾರ ಯುವ ಬ್ರಿಗೇಡ್ ನ ಈ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದರು.
ಖ್ಯಾತ ವಕೀಲರಾದ ರೇಖಾ ಕಮಿತ್‌ಕರ್‌ರವರು ಮಾತನಾಡಿ, ಇಂದಿನ ನಮ್ಮ ಸಮಾಜವನ್ನು ತಿದ್ದುವ, ಉತ್ತಮ ಹಾದಿಯಲ್ಲಿ ಕೊಂಡೊಯ್ಯುವ ಶಕ್ತಿ ಇರುವುದು ಕೇವಲ ಶಿಕ್ಷಕರುಗಳಿಗೆ ಮಾತ್ರ. ಶಿಕ್ಷಕರು ತಮ್ಮ ಶಿಷ್ಟರಿಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡಿದರೆ, ಎಲ್ಲರೂ ಉತ್ತಮ ವ್ಯಕ್ತಿಗಳಾಗಲು ಸಾಧ್ಯ. ಒಬ್ಬ ವ್ಯಕ್ತಿ ಒಂದು ಬಾರಿ ಕೆಟ್ಟ ಕೆಲಸ ಮಾಡಿದರೆ ಆತನ ಇಡೀ ಜೀವನ ಹಾಳಾಗುತ್ತದೆ. ಕೆಟ್ಟ ಕೆಲಸವನ್ನು ಮಾಡುವ ಮೊದಲು ಒಮ್ಮೆ ಯೋಜಿಸಿದರೆ ಸಾಕು ಎಷ್ಟೋ ಕೆಟ್ಟ ಕೆಲಸಗಳು ನಿಲ್ಲುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಗುರುವಿನ ಪಾತ್ರ ಅಪಾರ ಎಂದು ತಿಳಿಸಿದರು.
ಸಮಾರಂಭದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರುಗಳಾದ ಸತ್ಯನಾರಾಯಣರಾವ್ ಅಂಬರ್‌ಕರ್, ಗುರುಪ್ರಸಾದ್ ಪಿಸ್ಸೆ, ಸತ್ಯನಾರಾಯಣರಾವ್ ಅಸ್ಟಕರ್, ರಮಾನಂದ ಬಾಂಬೋರೆ, ವೆಂಕಟೇಶ್ ಪ್ರಸಾದ್ ಸಾಕ್ರೆ, ಪ್ರವೀಣ್ ಜಿಂಗಾಡೆ ಅವರುಗಳು ಮಾತನಾಡಿ, ಭಾವಸಾರ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಬೃಹತ್ ರಕ್ತದಾನ ಶಿಬಿರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಭಾವಸಾರ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಭಾವಸಾರ ಯುವ ಬ್ರಿಗೇಡ್ ಅಧ್ಯಕ್ಷರಾದ ವಿ.ಬಿ.ನಾಗೇಶ್ ತೇಲ್ಕರ್‌ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಭಾವಸಾರ ಕ್ಷತ್ರಿಯ ಸಮಾಜದ ಶಿಕ್ಷಕರು ಹಾಗೂ ಇಂಜಿನಿಯರ್ಸ್ಗಳಿಗೆ ಯುವ ಬ್ರಿಗೇಡ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಕರ‍್ಯಕ್ರಮದಲ್ಲಿ ಭಾವಸಾರ ಯುವ ಬ್ರಿಗೇಡ್‌ನ ಎಲ್ಲಾ ಪದಾಧಿಕಾರಿಗಳು, ಭಾವಸಾರ ಕ್ಷತ್ರಿಯ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.