ಕ್ಯಾತ್ಸಂದ್ರದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಶ್ರೀಸಿದ್ದಲಿಂಗಸ್ವಾಮೀಜಿ ಚಾಲನೆ
ತುಮಕೂರು : ಕ್ಯಾತ್ಸಂದ್ರದ ಶ್ರೀಆಭಯಾಂಜನೇಯಸ್ವಾಮಿ ಯುವಕ ಸಂಘ ಹಾಗೂ ಕ್ಯಾತ್ಸಂದ್ರ ನಾಗರಿಕರ ಯುವ ವೇದಿಕೆ ವತಿಯಿಂದ,ಅರಣ್ಯ ಇಲಾಖೆಯ ಸಹಕಾರದೊಂದಿಗೆ ಗುಂಡ್ಲಮ್ಮ ದೇವಾಲಯದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಸಿ ನೆಡುವ ಮೂಲಕ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀಸಿದ್ದಲಿಂಗಸ್ವಾಮೀಜಿ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶ್ರೀಸಿದ್ದಲಿಂಗಸ್ವಾಮೀಜಿ ಅವರು,ಪ್ರಸ್ತುತ ದಿನಗಳಲ್ಲಿ ಹವಾಮಾನ ವೈಫರಿತ್ಯ,ಪ್ರಕೃತಿ ವಿಕೋಪಗಳನ್ನು ತಡೆಯಲು ಇರುವ ಏಕೈಕ ಮಾರ್ಗವೆಂದರೆ ಹಸಿರು ಪ್ರದೇಶವನ್ನು ಹೆಚ್ಚಿಸುವುದು.ಈ ನಿಟ್ಟಿನಲ್ಲಿ ಕ್ಯಾತ್ಸಂದ್ರದ ಅಭಯಾಂ ಜನೇಯಸ್ವಾಮಿ ಯುವಕ ಸಂಘ ಹಾಗೂ ಕ್ಯಾತ್ಸಂದ್ರ ನಾಗರಿಕ ವೇದಿಕೆಯವರು ಧನಿಯಕುಮಾರ್ ಅವರ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ.ಇದೊಂದು ಘನ ಕಾರ್ಯ, ಪ್ರಕೃತಿ ಉಳಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ.ಹಾಗಾಗಿ ಪ್ರಕೃತಿಯನ್ನು ಉಳಿಸುವ ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಒಳ್ಳೆಯದಾಗಲಿ,ಪ್ರಕೃತಿಯಲ್ಲಿನ ಗಾಳಿ,ಬೆಳಕು,ನೀರು ಇವುಗಳು ಕಲುಷಿತವಾಗದಂತೆ ತಡೆಯಲು ವನಮಹೋ ತ್ಸವ ಅತ್ಯಂತ ಸೂಕ್ತ ಎಂದರು.
ಒಂದು ಸಮೀಕ್ಷೆಯ ಪ್ರಕಾರ ಭಾರತೀಯರ ಸರಾಸರಿ ವಯಸ್ಸು 10 ವರ್ಷ ಕಡಿಮೆಯಾಗಿದೆ.ಇದಕ್ಕೆ ಕಾರಣ ಪರಿಸರ ಮಲೀನಗೊಳ್ಳುತ್ತಿರುವುದು.ಇದಕ್ಕೆ ಹೋಗಲಾಡಿಸುವ ನಿಟ್ಟಿನಲ್ಲಿ ಜನರು,ಅದರಲ್ಲಿಯೂ ಯುವಜನರು ಮುಂದಾಗಬೇಕಾಗಿದೆ.
ಹಸಿರನ್ನೇ ಉಸಿರಾಗಿಸುವ ಕೆಲಸ ಮಾಡಬೇಕಾಗಿದೆ.ತಮ್ಮ, ಮನೆ ಮಂದಿಯ ಹುಟ್ಟು ಹಬ್ಬದ ನೆನಪಿಗಾಗಿ ಎಲ್ಲಿ ಖಾಲಿ ಜಾಗವಿದೆಯೋ ಅಲ್ಲಿ ಗಿಡ ನೆಡುವಂತಹ ಕೆಲಸವನ್ನು ಮಾಡಬೇಕಾಗಿದೆ.ಸಮಾಜ ಕಟ್ಟುವ ಕೆಲಸದಲ್ಲಿ ನೀವೆಲ್ಲರೂ ಭಾಗಿಯಾಗಿ ಎಂದು ಶ್ರೀಸಿದ್ದಲಿಂಗಸ್ವಾಮೀಜಿಗಳು ಶುಭ ಹಾರೈಸಿದರು.
ಹಿರಿಯ ಸಾಹಿತಿ ಡಾ.ಕವಿತಾ ಕೃಷ್ಣ ಮಾತನಾಡಿ,ಅಭಯಾಂಜನೇಯಸ್ವಾಮಿ ಯುವಕರ ಸಂಘ ಹಸಿರು ಪರಿಸರ ಹೆಚ್ಚಿಸುವ ಕೆಲಸಕ್ಕೆ ಮುಂದಾಗಿರುವುದು ಒಳ್ಳೆಯ ಕೆಲಸ.ಕೇವಲ ಗಿಡ ನೆಟ್ಟರೆ ಸಾಲದು, ಅದನ್ನು ಪೋಷಿಸಿ, ಬೆಳೆಸಬೇಕಿದೆ. ಹಸಿರನ್ನು ಉಸಿರಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರು.
ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್,ಕ್ಯಾತ್ಸಂದ್ರ ಯುವಕರು ಒಗ್ಗೂಡಿ ಇಡೀ ಊರನ್ನೇ ಹಸಿರಾಗಿಸಲು ಹೊರಟಿದ್ದಾರೆ. ಇದಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು.
ಈ ವೇಳೆ ಭ್ರಷ್ಟಾಚಾರ ನಿಮೂರ್ಲನಾ ವೇದಿಕೆ, ಮಾನವ ಹಕ್ಕು ಸಂರಕ್ಷಣಾ ವೇದಿಕೆ ಸದಸ್ಯರು ಹಾಗೂ ರೈತ ಸಂಘದ ಅಧ್ಯಕ್ಷರಾದ ಪರುಶುರಾಮ್,ಅಭಯಾಂಜನೇಯಸ್ವಾಮಿ ಯುವಕರ ಸಂಘದ ವಿಠಲ್, ಮಲ್ಲಸಂದ್ರ ಶಿವಣ್ಣ,ಅರವಿಂದ್, ಅಶೋಕ್, ಪಟೇಲ್ ಉಮೇಶ್, ಲೋಕೇಶ್, ತಿಲಕ್ ಅವರುಗಳು ಉಪಸ್ಥಿತರಿದ್ದರು.