
ಶಿರಾ : ಕರ್ನಾಟಕ ರಾಜ್ಯದ ವಿವಿಧ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರು, ಲೋಡರ್ಸ್ ಸಹಾಯಕರು, ವಾಟರ್ಮೆನ್, ಡಾಟಾ ಆಪರೇರ್ಸ್ ಮತ್ತು ನೆಲ ಭರ್ತಿ ಕೆಲಸಗಾರರನ್ನು ಗುತ್ತಿಗೆ ಪದ್ಧತಿ ಬದಲು ಪೌರಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆ ಒಳಪಡಿಸಲು ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಶಿರಾ ನಗರಸಭೆಯ ಹೊರಗುತ್ತಿಗೆ ವಾಹನ ಚಾಲಕರ ಸಂಘದ ವತಿಯಿಂದ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ವಾಹನ ಚಾಲಕರ ಸಂಘದ ಅಧ್ಯಕ್ಷ ಸುದರ್ಶನ್ ಮಾತನಾಡಿ ಕರ್ನಾಟಕ ರಾಜ್ಯದ ವಿವಿಧ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರು, ಲೋಡರ್ಸ್ ಸಹಾಯಕರು, ವಾಟರ್ಮೆನ್, ಡಾಟಾ ಆಪರೇರ್ಸ್ ಮತ್ತು ನೆಲ ಭರ್ತಿ ಕೆಲಸಗಾರರು ಅತ್ಯಂತ ದಮನಿತರಾಗಿದ್ದು, ಕಳೆದ 2017ರಲ್ಲಿ ಪೌರಕಾರ್ಮಿಕರನ್ನು ವಿಶೇಷ ನೇಮಕಾತಿಯಡಿ ಖಾಯಂಗೊಳಿಸಿದ ಸರಕಾರ ಪೌರಕಾರ್ಮಿಕರೊಟ್ಟಿಗೆ ಕೆಲಸ ನಿರ್ವಹಿಸುವ ಈ ಕೆಲಸಗಾರರನ್ನು ನಿರ್ಲಕ್ಷ ಮಾಡಿದೆ. ಬಹುತೇಕ ಸ್ಥಳೀಯ ಸಂಸ್ಥೆಯಲ್ಲಿ ಸಕಾಲಕ್ಕೆ ವೇತನ ನೀಡದಿರುವುದು ಕನಿಷ್ಟವೇತನ, ಭವಿಷ್ಯ ನಿಧಿ ನೀಡದೆ ಗುತ್ತಿಗೆ ಏಜೆನ್ಸಿಗಳು ವಂಚಿಸುವುದು ಸರ್ವೇಸಾಮಾನ್ಯವಾಗಿದೆ. ಇದರ ಬಗ್ಗೆ ಪ್ರಶ್ನಿಸುವ ನೌಕರರಿಗೆ ಕಿರುಕುಳ ನೀಡಿ ಕೆಲಸದಿಂದ ಕೈಬಿಡಲಾಗುತ್ತಿದೆ. ನಗರದ ಸ್ವಚ್ಚತೆಯ ಪ್ರಮುಖ ಜವಾಬ್ದಾರಿ ನಿರ್ವಹಿಸುವ ನಮಗೆ ಸೇವಾ ಭದ್ರತೆ ನೀಡುವ ದೃಷ್ಟಿಯಿಂದ ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ನೇಮಕಾತಿ ನೇರವೇತನ ಜಾರಿಗೊಳಿಸಲು ಸರಕಾರದ ಗಮನ ಸೆಳೆಯುವಂತೆ ಶಾಸಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಎನ್.ಕಂಬಣ್ಣ, ಉಪಾಧ್ಯಕ್ಷ ಮಹಂತೇಶ, ಕಾರ್ಯದರ್ಶಿ ಹನುಮಂತಪ್ಪ, ಲಿಂಗರಾಜು, ಎಂ.ರಂಗನಾಥ, ಕೆ.ಭೂತೇಶ, ಎಲ್.ರಮೇಶ್, ಸೇರಿದಂತೆ ಹಲವರು ಹಾಜರಿದ್ದರು.