ತುಮಕೂರು : ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಸರ್ಕಾರದಿಂದ ದೊರೆಯುವ ಆರೋಗ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿಂದು ನಡೆದ ವಿಶೇಷ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, 0-18 ವರ್ಷದೊಳಗಿನ ಮಕ್ಕಳು ಹಾಗೂ ಗಂಡಾಂತರ ಗರ್ಭಿಣಿ ಸ್ತ್ರೀಯರ ತೀವ್ರತರವಾದ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಒದಗಿಸುವ ಮೂಲಕ ಅಪೌಷ್ಠಿಕತೆಯನ್ನು ನಿರ್ಮೂಲನೆ ಮಾಡುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದರು.
ಅಪೌಷ್ಟಿಕತೆ ನಿರ್ಮೂಲನೆಗಾಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಆರೋಗ್ಯ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳಿಂದ ಪ್ರತಿ ಹಂತದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಸರ್ಕಾರದ ಆರೋಗ್ಯ ಯೋಜನೆಗಳಡಿಯಲ್ಲಿ ಅಪೌಷ್ಟಿಕತೆ ನಿರ್ಮೂಲನೆಗೆ ಅವಶ್ಯವಿರುವ ಪೌಷ್ಟಿಕ ಆಹಾರಗಳನ್ನು ನೀಡಲಾಗುತ್ತಿದ್ದು, ಗ್ರಾಮೀಣ ಭಾಗದ ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಭವಿಷ್ಯ ಭಾರತ ನಿರ್ಮಾಣಕ್ಕೆ ಇಂದಿನ ಮಕ್ಕಳ ಹಾಗೂ ಯುವಜನತೆಯ ಪಾತ್ರ ಬಹಳ ಮುಖ್ಯವಾಗಿದೆ. ಸದೃಢ ಸಮಾಜದ ನಿರ್ಮಾಣದಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಬಹಳ ಮುಖ್ಯ ಪಾತ್ರವಹಿಸುತ್ತದೆ ಎಂದರು.
ಇತ್ತೀಚೆಗೆ ದೇಶದಲ್ಲಿ ಕಿಶೋರಾವಸ್ಥೆಯ ಹೆಣ್ಣುಮಕ್ಕಳು ಹೆಚ್ಚಾಗಿ ರಕ್ತಹೀನತೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಒಂದು ಹೆಣ್ಣು ಮಗು ಆರೋಗ್ಯವಾಗಿಲ್ಲವೆಂದರೆ ಆಕೆಯ ಕುಟುಂಬದ ಜೊತೆಗೆ ಭವಿಷ್ಯದ ಸಮಾಜಕ್ಕೂ ಹಾನಿಯಾಗುತ್ತದೆ. ಹಾಗಾಗಿ ಸರ್ಕಾರದಿಂದ ದೊರೆಯುವ ಪೌಷ್ಠಿಕಯುಕ್ತ ಆಹಾರವನ್ನು ಪ್ರತಿನಿತ್ಯ ಸೇವಿಸುವ ಅಭ್ಯಾಸವನ್ನು ಹೆಣ್ಣು ಮಕ್ಕಳು ರೂಢಿಸಿಕೊಳ್ಳಬೇಕು ಎಂದು ಸಲಹೆಯಿತ್ತರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್.ಶ್ರೀಧರ್ ಮಾತನಾಡಿ, ಕೋವಿಡ್ ಮಹಾಮಾರಿಯ ವಿರುದ್ಧ ಜಯಿಸಲು ಪ್ರತಿಯೊಬ್ಬ ಮನುಷ್ಯನಿಗೂ ರೋಗನಿರೋಧಕ ಶಕ್ತಿ ಅತೀ ಮುಖ್ಯವಾಗಿದ್ದು, 18 ವರ್ಷದೊಳಗಿನ ಮಕ್ಕಳ ರೋಗನಿರೋಧಕ ಶಕ್ತಿ ವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಅನಾರೋಗ್ಯ ಮತ್ತು ಅಪೌಷ್ಠಿಕತೆಯ ವಿರುದ್ಧ ಹೋರಾಡುವ ಉದ್ದೇಶದಿಂದ ದೇಶಾದ್ಯಂತ ಪೋಷಣಾಭಿಯಾನ ಆರಂಭಿಸಲಾಗಿದೆ. ಈ ಅಭಿಯಾನದಡಿ ತಾಯಿ ಮತ್ತು ಮಗುವಿನ ಪಾಲನೆ ಮತ್ತು ಪೋಷಣೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು, 1000 ದಿನಗಳವರೆಗೆ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದೆ. ಕಿಶೋರಾವಸ್ಥೆಯಲ್ಲಿರುವ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಐ.ಎಫ್.ಎಸ್(ಐರನ್ ಅಂಡ್ ಫಾಲಿಕ್ ಆ್ಯಸಿಡ್-ಕಬ್ಬಿಣಾಂಶ) ಮಾತ್ರೆಗಳನ್ನು ಆಯಾ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರಗಳ ಮೂಲಕ ಒದಗಿಸಲಾಗುತ್ತಿದೆ. ಗರ್ಭಿಣಿ ಸ್ತ್ರೀಯರು, ಹೆಣ್ಣು ಮಕ್ಕಳು ಹಾಗೂ 18 ವರ್ಷದೊಳಗಿನ ಎಲ್ಲಾ ಮಕ್ಕಳು ಈ ಅಭಿಯಾನದ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಕೇಶವ್‌ರಾಜ್ ಮಾತನಾಡಿ, ಪ್ರತೀವಾರ ನಿಗಧಿತ ತಾಲ್ಲೂಕುಗಳಲ್ಲಿ ನಿಗಧಿತ ದಿನಾಂಕದAದು 0-18 ವರ್ಷದ ಮಕ್ಕಳು, ನ್ಯೂನ್ಯತೆಗೊಳಗಾಗಿರುವ ಮಕ್ಕಳು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಗರ್ಭಿಣಿ ಸ್ತ್ರೀಯರಿಗೆ ಇದೇ ರೀತಿಯ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಪ್ರತಿ 2 ತಿಂಗಳಿಗೊಮ್ಮೆ ಈ ಕಾರ್ಯಕ್ರಮಗಳು ಪುನರಾವರ್ತನೆಯಾಗುತ್ತವೆ. ಹೃದಯ ಸಂಬಂಧಿ ರೋಗಗಳು ಸೇರಿದಂತೆ ಇನ್ನಿತರ ಯಾವುದೇ ರೀತಿಯ ತೀವ್ರತರವಾದ ದೈಹಿಕ ಸಮಸ್ಯೆಗಳಿದ್ದಲ್ಲಿ ಅಂತಹ ಮಕ್ಕಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತçಚಿಕಿತ್ಸಕ ಡಾ.ಟಿ.ಎಂ. ವೀರಭದ್ರಯ್ಯ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಸನ್ನತ್, ಡಾ.ಮೋಹನ್, ದಿನೇಶ್, ಹಾಗೂ ಸಾರ್ವಜನಿಕರು ಹಾಜರಿದ್ದರು.