ಗುಬ್ಬಿ : ನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಹಿನ್ನಲೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತ್ವತ್ವದಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಮೇಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಚಂಗಾವಿ ಗ್ರಾಮದಲ್ಲಿ ನಡೆಯಿತು.
ನರೇಗಾ ಕಾಮಗಾರಿಯಲ್ಲಿ 70 ಸಾವಿರ ಪ್ಯಾಕೇಜ್ ಕೆಲಸದಲ್ಲಿ 45 ಸಾವಿರ ಹಣ ಅವ್ಯವಹಾರವಾಗಿದೆ. ಯಾವುದೇ ದಾಖಲೆ ಇಲ್ಲದೇ ಮಹಿಳಾ ಸದಸ್ಯೆ ಶಾಂತಮ್ಮ ಅವರ ಪತಿ ಕೃಷ್ಣಪ್ಪ ಅವರು ಜಾಬ್‌ಕಾರ್ಡ್ದಾರರ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಭ್ರಷ್ಟಾಚಾರಕ್ಕೆ ಪ್ರಚೋದನೆ ನೀಡಿದ ಶಾಸಕ ಜಯರಾಂ ಆಣಿತಿಯಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ಉದ್ಯೋಗ ಖಾತ್ರಿ ಯೋಜನೆಯ ಹಣ ಲಪಾಟಿಸುತ್ತಿರುವುದು ಖಂಡನೀಯ. ಈ ಬಗ್ಗೆ ಮೇಲಾಧಿಕಾರಿಗಳು ತನಿಖೆ ನಡೆಸಿ ಸಂಬಂಧಪಟ್ಟ ಪಿಡಿಓ ಮೇಲೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸ್ಥಳಕ್ಕೆ ಜಿಪಂ ಸಿಇಓ ಬರಬೇಕು ಎಂದು ಪಟ್ಟು ಹಿಡಿದು ಕಚೇರಿಗೆ ಬೀಗ ಜಡಿದು ಧರಣಿ ನಡೆಸಿದರು.
ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರಕ್ಕೆ ಪಿಡಿಓಗಳು ಸಾಥ್ ನೀಡುತ್ತಿರುವ ಬಗ್ಗೆ ತಾಲ್ಲೂಕಿನಲ್ಲಿ ದೂರು ಬರುತ್ತಿವೆ. ಇಂತಹ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ಶಾಸಕರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ತೆಂಗಿನಸಸಿ ನೆಡುವ ಕಾಮಗಾರಿ, ಉದುಬದಿ, ಕೊಟ್ಟಿಗೆಮನೆ ಹೀಗೆ ಅನೇಕ ನರೇಗಾ ಕೆಲಸಗಳು ಬಿಲ್‌ನಲ್ಲಿ ಮಾತ್ರ ನಡೆದಿರುತ್ತವೆ. ಈ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕಿದೆ. ಚಂಗಾವಿ ಪಂಚಾಯಿತಿಯಲ್ಲಿ ಮಹಿಳಾ ಸದಸ್ಯರ ಗಂಡಂದಿರೇ ದರ್ಬಾರ್ ನಡೆಸುತ್ತಿದ್ದಾರೆ. ಎಲ್ಲಾ ಕೆಲಸಗಳಿಗೂ ಹಸ್ತಕ್ಷೇಪ ಮಾಡುವ ಮಹಿಳಾ ಸದಸ್ಯರ ಗಂಡಂದಿರ ವಿರುದ್ದ ಕ್ರಮ ಕೈಗೊಳ್ಳಬೇಕು. ಜೊತೆಯಲ್ಲಿ ಸದಸ್ಯತ್ವ ರದ್ದು ಮಾಡಲು ಮೇಲಾಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.
ಬೀಗ ಜಡಿದು ಸುಮಾರು ಒಂದು ತಾಸು ಪ್ರತಿಭಟನೆ ನಡೆಸಿ ನಂತರ ತಾಪಂ ಇಒ ನರಸಿಂಹಯ್ಯ ಅವರಿಗೆ ಫೋನ್ ಮೂಲಕ ತರಾಟೆಗೆ ತೆಗೆದುಕೊಂಡ ಮಾಜಿ ಶಾಸಕರು ಪಿಡಿಓ ಈ ಅವ್ಯವಹಾರಕ್ಕೆ ಸಹಕರಿಸಿದ್ದಾರೆ. ಶಾಸಕರ ಮಾತಿನಂತೆ ನಡೆದುಕೊಳ್ಳುವ ಅಧಿಕಾರಿ ಪಂಚಾಯತ್ ನಿಯಮಗಳಾನುಸಾರ ಕೆಲಸ ಮಾಡಲು ಎಚ್ಚರಿಸಬೇಕು. ಈ ಅವ್ಯವಹಾರ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸದಸ್ಯರ ವಿರುದ್ದ ಕಾನೂನು ಶಿಸ್ತು ಕ್ರಮ ಜಾರಿ ಮಾಡುವಂತೆ ಆಗ್ರಹಿಸಿದರು. ಈ ಜೊತೆಗೆ ಖಾತೆ ಮಾಡುವ ಸಾಕಷ್ಟು ಲಂಚ ಪಡೆಯುವ ದೂರುಗಳು ಸಾರ್ವಜನಿಕರಿಂದ ಬರುತ್ತಿದೆ. ಯಾವುದೇ ದಾಖಲೆಗೆ ಬರುವ ಮುಗ್ದ ಜನರಿಂದ ಹಣ ಲೂಟಿ ಮಾಡುವ ಬಗ್ಗೆ ಇಲ್ಲಿನ ಸದಸ್ಯರೇ ಆರೋಪಿಸಿದ್ದಾರೆ. ಈ ಬಗ್ಗೆ ಕೂಡಾ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕುಮಾರ್, ರಾಮು, ರಾಜಣ್ಣ, ಕೃಷ್ಣಪ್ಪ, ರಾಘವೇಂದ್ರ, ರಾಜೇನಹಳ್ಳಿ ಮೂರ್ತಣ್ಣ, ಸಿ.ಎಂ.ನರಸಿಂಹಮೂರ್ತಿ, ಬಂಡೆ ಗಂಗಣ್ಣ, ಗೋವಿಂದರಾಜು ಇತರರು ಇದ್ದರು.