ನೋಂದಣಿ ಇಲ್ಲದ ವಾಹನ, ಅಪಾಯಕ್ಕೆ ಆಹ್ವಾನ : ಬಿಎಸ್4 ವಾಹನ ಮಾರಾಟ ಮಾಲೀಕರ ಪರದಾಟ
ತುಮಕೂರು: ಸುಪ್ರೀಂ ಕೋರ್ಟ್ ಬಿಎಸ್4 ವಾ ಹನ ಮಾರಾಟವನ್ನು ನಿಷೇಧ ಮಾಡಿ ಆದೇಶ ಹೊರಡಿಸಿದ್ದ ನಂತರ ನಡೆದಿರುವ ಬಿಎಸ್4 ದ್ವಿಚಕ್ರವಾಹನಗಳ ಮಾರಾಟದಿಂದ ವಾಹನಗಳ ಮಾಲೀಕರು ನೋಂದಣಿ ಇಲ್ಲದೆ, ವಾಹನವನ್ನು ಓಡಿಸಲು ಆಗದೇ ಪರದಾಡುವಂತಹ ಸ್ಥಿತಿ ನಿ ರ್ಮಾಣವಾಗಿದೆ.
ತುಮಕೂರು ಆರ್‌ಟಿಒ ಕಚೇರಿವೊಂದರಲ್ಲಿಯೇ ಸುಮಾರು 20ಕ್ಕೂ ಹೆಚ್ಚು ನೋಂದಣಿ ಆಗದ ಬಿಎಸ್4 ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಜಿಲ್ಲೆಯಲ್ಲಿ 2019ರ ನಂತರವೂ ಲೆಕ್ಕವಿಲ್ಲದಷ್ಟು ಬಿಎಸ್4 ವಾಹನಗಳ ಮಾರಾಟ ನಡೆದಿದ್ದು, ವಾಹನ ಕೊಂಡುಕೊಂಡ ನಂತರ ಸುಪ್ರೀಂಕೋರ್ಟ್ ನಿರ್ದೇಶನದಂತೆ ನೋಂದಣಿ ಮಾಡಲು ಅವಕಾಶವಿಲ್ಲದ ಕಾರಣ, ಬಿಎಸ್4 ವಾಹನ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ.
2019ರ ಡಿಸೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಬಿಎಸ್4 ಮಾರಾಟ ನಿಷೇಧ ಮಾಡಿದ ನಂತರ ಅನಧಿಕೃತವಾಗಿ ಶೋರೂಂನಲ್ಲಿಯೇ ಉಳಿದುಕೊಂಡಿದ್ದ ಬಿಎಸ್4 ವಾಹನಗಳ ಲೆಕ್ಕಾಚಾರ ನೀಡದೇ, ನಿಷೇಧಗೊಂಡ ಬಿಎಸ್4 ವಾಹನಗಳನ್ನು ಸಾರ್ವಜನಿಕರಿಗೆ ರಿಯಾಯಿತಿ ಮೇಲೆ ಮಾರಾಟ ಮಾಡಿದ್ದು, ತಾತ್ಕಾಲಿಕ ನೋಂದಣಿಯಾಗಿದ್ದ ಬಿಎಸ್4 ವಾಹನಗಳನ್ನು ಸಾರ್ವಜನಿಕರ ತಲೆಗೆ ಕಟ್ಟಿ, ಹಣ ಪಡೆದು ಕೈತೊಳೆದುಕೊಂಡಿವೆ ಎನ್ನಲಾಗುತ್ತಿದೆ.
ಆರ್‌ಟಿಒ, ಪೊಲೀಸ್ ನಿಗಾ: ತುಮಕೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ನೋಂದಣಿಯಿಲ್ಲದ ವಾಹನಗಳ ಸಂಚಾರ ಹೆಚ್ಚಳವಾಗಿದ್ದು, ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನು ಪಡೆದು ಸಂಚರಿಸುತ್ತಿರುವ ದ್ವಿಚಕ್ರ ವಾಹನಗಳ ಬಗ್ಗೆ ನಿಗಾವಹಿಸಬೇಕಿದೆ, ನೋಂದಣಿ ಇಲ್ಲದೇ, ವಿಮೆ ಇಲ್ಲದೇ ವಾಹನ ಅಪಘಾತಕ್ಕೆ ಒಳಗಾಗಿ, ಸವಾರರ ಪ್ರಾಣಕ್ಕೆ ಅಪಾಯವಾದರೆ ಅದಕ್ಕೆ ಯಾರು ಹೊಣೆ ಎನ್ನುವ ಆಕ್ರೋಶವನ್ನು ಮಾಲೀಕರು ಹೊರ ಹಾಕಿದ್ದಾರೆ.
ತುಮಕೂರು ಆರ್‌ಟಿಒ ಒಂದರಲ್ಲಿಯೇ 20ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಪೊಲೀಸ್ ಇಲಾಖೆ ವಶದಲ್ಲಿ ಇನ್ನೇಷ್ಟು ನೋಂದಣಿಯಾಗದ ಬಿಎಸ್4 ವಾಹನಗಳು ಇರಬಹುದು? ನೋಂದಣಿಯಾಗದ ವಾಹನಗಳು ದಿನನಿತ್ಯ ರಸ್ತೆಗೆ ಇಳಿಯುತ್ತಿರುವಾಗ, ದಂಡ ವಿಧಿಸುವ ಪೊಲೀಸರು ಈ ಬಗ್ಗೆ ತಪಾಸಣೆ ನಡೆಸಿಲ್ಲವೇ? ಎನ್ನುವ ಅನುಮಾನಗಳನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಆಫರ್ ಮಾರಾಟ ಈಗ ಪರದಾಟ: ಬಿಎಸ್4 ವಾಹನಗಳನ್ನು ತಾತ್ಕಾಲಿಕ ನೋಂದಣಿ ಆಧಾರದ ಮೇಲೆ ಸಾರ್ವಜನಿಕರಿಗೆ ಮಾರಾಟ ಮಾಡಿರುವ ಶೋ ರೂಂ ಮಾಲೀಕರುಗಳ ಆಫರ್‌ಗೆ ಮರುಳಾಗಿ ಈಗ ಪರದಾಡುತ್ತಿದ್ದಾರೆ. ಕಡಿಮೆ ದರದಲ್ಲಿ ವಾಹನ ತಂದ ಖುಷಿಯಲ್ಲಿದ್ದವರಿಗೆ, ಈಗ ಹಣವು ಇಲ್ಲ ವಾಹನವೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಶೋ ರೂಂ ಮಾಲೀಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬಿಎಸ್4 ವಾಹನಗಳನ್ನು ವಾಪಾಸ್ ಕಂಪೆನಿಗಳಿಗೆ ನೀಡದೇ ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಿದ್ದು, ಜಿಲ್ಲೆಯೊಂದರಲ್ಲಿಯೇ ಸಾವಿರಾರು ವಾಹನಗಳು ಮಾರಾಟವಾಗಿದ್ದರೆ, ಇಡೀ ರಾಜ್ಯದಲ್ಲಿ ಇನ್ನೆಷ್ಟು ಮಂದಿಗೆ ಮಕ್ಮಲ್ ಟೋಪಿಯನ್ನು ಶೋ ರೂಂ ಮಾಲೀಕರು ಹಾಕಿ ಕೋಟ್ಯಂತರ ರೂ ದೋಚಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಲೆಕ್ಕ ನೀಡದೇ ಉಳಿದಿದ್ದ ವಾಹನಗಳ ಮಾರಾಟ ಹಾಗೂ ಸಾರ್ವಜನಿಕರ ಆರೋಪದ ನಡುವೆ ದಾಖಲೆಗಳನ್ನು ನಾಶ ಪಡಿಸಲು ಶೋ ರೂಂ ಮಾಲೀಕರು ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ.