ಕ್ರೈಂ ನ್ಯೂಸ್ಗುಬ್ಬಿಜಿಲ್ಲೆತುಮಕೂರು
Trending
ದಂಡಿನ ಮಾರಮ್ಮ ದೇವಾಲಯದ ಹುಂಡಿ ಹೊಡೆದು ಲಕ್ಷಾಂತರ ರೂಪಾಯಿ ಹಣ ಕಳವು : ಗುಬ್ಬಿ ಪೊಲೀಸರ ವೈಪಲ್ಯಕ್ಕೆ ಹಿಡಿದ ಕನ್ನಡಿ
ಗುಬ್ಬಿ : ಕಡಬಾ ಪೊಲೀಸ್ ಉಪ ಠಾಣೆಯ ಪಕ್ಕದ ಗ್ರಾಮದ ದಂಡಿನ ಮಾರಮ್ಮ ದೇವಿಯ ದೇವಾಲಯದಲ್ಲಿ ಬುಧವಾರ ತಡರಾತ್ರಿ ಕಳ್ಳರು ಹುಂಡಿ ಹೊಡೆದು ಲಕ್ಷಾಂತರ ರೂಪಾಯಿ ಹಣ ದೋಚಿ ಕೊಂಡು ಹೋಗಿರುವ ಘಟನೆ ನಡೆದಿದೆ.
ಗುಬ್ಬಿ ತಾಲೂಕು ಕಡಬಾ ಹೋಬಳಿಯ ಕಡಬಾ ಗ್ರಾಮದ ಪೊಲೀಸ್ ಉಪ ಠಾಣೆಯ ಸಮೀಪದಲ್ಲಿ ಇರುವ ಇತಿಹಾಸ ಪ್ರಸಿದ್ಧ ದಂಡಿನ ಮಾರಮ್ಮ ದೇವಸ್ಥಾನದ ಕಿಟಕಿ ಕಂಬಿಯನ್ನು ಯಂತ್ರ ಬಳಸಿ ಮುರಿದು ಹಾಕಿ ಸುಮಾರು ಲಕ್ಷಾಂತರ ರೂಪಾಯಿ ಕಳವು ಮಾಡಿ ತಮ್ಮ ಕೈಚಳಕ ತೋರಿಸಿರುವ ಘಟನೆಗೆ ಗ್ರಾಮದ ಜನತೆ ಭಯಭೀತರಾಗಿದ್ದಾರೆ.
ದೇವಸ್ಥಾನದ ಕಿಟಕಿ ಮುರಿದು ಒಳ ಪ್ರವೇಶಿಸಿದ ದುಷ್ಟರು ಸಿ.ಸಿ.ಟಿ.ವಿ.ಯ ಹಾರ್ಡ್ ಡಿಸ್ಕ್ ತೆಗೆದುಕೊಂಡು ಆವರಣದಲ್ಲಿ ದೇವಿಗೆ ವಾಮಾಚಾರ ಮಾಡಿ, ದಿಗ್ಬಂಧನ ವಿದಿಸಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಪ್ರಮಾಣದ ಹಣವನ್ನು ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ.
ಗುಬ್ಬಿ ಮೈಸೂರು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಬದಿಯಲ್ಲಿ ಇರುವ ಈ ದೇವಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇದ್ದು ಜೊತೆಗೆ ಪೊಲೀಸ್ ಉಪ ಠಾಣೆಯ ಪಕ್ಕದಲ್ಲಿ ದೇವಸ್ಥಾನ ಇದ್ದು ಕೂಡ ಕಳ್ಳತನ ನಡೆದಿರುವುದು ಪೊಲೀಸ್ ಇಲಾಖೆಯ ವೈಪಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ಸರಣಿ ಕಳ್ಳತನ,ಗಂಧದ ಮರ ಕಳ್ಳತನ,ಅಕ್ರಮ ಜೂಜಾಟಗಳು ಹೀಗೆ ಹತ್ತು ಹಲವು ಪ್ರಕರಣಗಳು ಗುಬ್ಬಿ ತಾಲ್ಲೂಕಿನಾದ್ಯಂತ ನಡೆಯುತ್ತಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇತ್ತ ಗಮನ ಹರಿಸಿ ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಜೊತೆಗೆ ತಾಲ್ಲೂಕಿನ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಮನವಿ ಮಾಡಲಾಗಿದೆ.
ವರದಿ – ದೇವರಾಜು