ತುಮಕೂರು:ಪಕ್ಷ ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಇಂದಿನಿAದ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ನೊಂದಣಿ ಆಭಿಯಾನ ಆರಂಭಿಸಿದ್ದು,ಪಕ್ಷದ ಎಲ್ಲಾ ಕಾರ್ಯಕರ್ತರು ಸದಸ್ಯತ್ವ ಪಡೆಯುವ ಮೂಲಕ ಪಕ್ಷವನ್ನು ಬಲಪಡಿಸುವು ದಲ್ಲದೆ,2023ರ ಚುನಾವಣೆಯಲ್ಲಿ ಜೆಡಿಎಸ್ ಸ್ವಾತಂತ್ರವಾಗಿ ಅಧಿಕಾರ ಹಿಡಿಯುವಂತೆ ಮಾಡಬೇಕೆಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಕರೆ ನೀಡಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಆದೇಶದಂತೆ,ಪಕ್ಷದ ಕಾರ್ಯಕರ್ತರಾದ ಹಾಲೆನೂರು ಆನಂತಕುಮಾರ್,ಬೆಳ್ಳಿಲೋಕೇಶ್,ಗ್ರಾಮಾಂತರದ ಕೆಂಪಣ್ಣ ಅವರುಗಳಿಗೆ ಸದಸ್ಯತ್ವದ ಅರ್ಜಿ ಫಾರಂ ನೀಡುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,2023ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳನ್ನಾಗಿ ಮಾಡಬೇಕೆಂಬ ಗುರಿಯನ್ನು ಎಲ್ಲಾ ಕಾರ್ಯಕರ್ತರು ಹೊಂದುವಂತೆ ಸಲಹೆ ನೀಡಿದರು.
ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ಐದು ಸಾವಿರ ಕಾರ್ಯಕರ್ತರನ್ನು ನೊಂದಾಯಿಸುವಂತೆ ಸೂಚನೆ ನೀಡಿದ್ದಾರೆ.ಆದರೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ದೊಡ್ಡದಿದ್ದು,ಕನಿಷ್ಠ 25 ಸಾವಿರವಾದರೂ ಬೇಕು ಎಂಬ ಬೇಡಿಕೆಯನ್ನು ರಾಷ್ಟ್ರೀಯ ಅಧ್ಯಕ್ಷರ ಮುಂದಿಟ್ಟಿದ್ದೇನೆ.ಮೊದಲ ಹಂತದಲ್ಲಿ ತಲಾ ಐದು ಸಾವಿರ ಕಾರ್ಯಕರ್ತರನ್ನು ನೊಂದಾಯಿಸಿ,ಮುಂದಿನ ಶನಿವಾರದೊಳಗೆ ಐದು ಸಾವಿರ ಸದಸ್ಯತ್ವ ನೊಂದಾಯಿಸಿ,ಕಳುಹಿಸಲು ಸೂಚಿಸಿದ್ದಾರೆ.ಅದರಂತೆ ಕಾರ್ಯನಿರ್ವಹಿಸಲಾಗುವುದು ಎಂದರು.
ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯದ ಜನತೆಯನ್ನು ಭ್ರಮನಿರಸನಗೊಳಿಸಿವೆ.ಹಾಗಾಗಿ ರಾಜ್ಯದ ಜನತೆಗೆ ಏಕೆ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಪಕ್ಷಕ್ಕೆ ಅವಕಾಶ ನೀಡಬಾರದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.ಹಾಗಾಗಿ ಜೆಡಿಎಸ್ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರೆಲ್ಲರೂ ಒಗ್ಗೂಡಿ, ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮುಂದಾಗಬೇಕಿದೆ ಎಂದರು ಶಾಸಕ ಗೌರಿಶಂಕರ್ ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ಸದಸ್ಯತ್ವ ಅಭಿಯಾನದ ಮೂಲಕ ಹೊಸ ಶಖೆ ಆರಂಭವಾಗಿದೆ.ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ 20 ತಿಂಗಳ ಆಡಳಿತವನ್ನು ಜನತೆ ಇಂದಿಗೂ ಮರೆತ್ತಿಲ್ಲ.ಬಡವರಿಗೆ, ದೀನದಲಿತರಿಗೆ ನೂರಾರು ಕಾರ್ಯಕ್ರಮಗಳನ್ನು ನೀಡಿ, ಜನರು ನೆಮ್ಮದಿಯಿಂದ ಬದುಕುವಂತೆ ಮಾಡಿದ್ದಾರೆ.ಪಕ್ಷವನ್ನು ಪ್ರಜಾಸತ್ತಾತ್ಮಕವಾಗಿ ಕಟ್ಟುವ ನಿಟ್ಟಿನಲ್ಲಿ ಈ ಸದಸ್ಯತ್ವ ಅಭಿಯಾನ ಬಹಳ ಮಹತ್ವದ ಪಾತ್ರ ವಹಿಸಲಿದೆ. ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನದಂತೆ ಮುಂದಿನ ಒಂದು ವಾರದೊಳಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಾವಿರ ಜನ ಕಾರ್ಯಕರ್ತರನ್ನು ನೊಂದಾಯಿಸಿ, ಕಳುಹಿಸಿಕೊಡಲಾಗುವುದು ಎಂದರು.
ಈ ವೇಳೆ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ನಗರ ಅಧ್ಯಕ್ಷ ಬೆಳ್ಳಿಲೋಕೇಶ್,ಗ್ರಾಮಾಂತರ ಅಧ್ಯಕ್ಷ ಹಾಲೆನೂರು ಆನಂತಕುಮಾರ್,ರಾಜ್ಯ ಉಪಾಧ್ಯಕ್ಷ ಎಂ.ಗಂಗಣ್ಣ,ಕೆಂಪಹನುಮಯ್ಯ,ಸೊಗಡು ವೆಂಕಟೇಶ್,ಸೈಯದ್ ಪೈಯು,ವಿಶ್ವೇಶ್ವರಯ್ಯ, ಮಹಿಳಾ ಘಟಕ ಜಿಲ್ಲಾದ್ಯಕ್ಷೆ ತಾಹೀರ ಬಾನು,ನಗರ ಅಧ್ಯಕ್ಷರಾದ ಜಯಶ್ರೀ,ಪ್ರಧಾನ ಕಾರ್ಯದರ್ಶಿ ಲೀಲಾವತಿ, ನಗರ ಕಾರ್ಯದರ್ಶಿ ಯಶೋಧ ಸೇರಿದಂತೆ ಹಲವರು ಭಾಗವಹಿಸಿದ್ದರು.