ಕುಣಿಗಲ್ : ಅಂಗನವಾಡಿ ನೌಕರರ ಬೇಡಿಕೆ ಸಂಬಂಧ, ವಿಧಾನ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ನ್ಯಾಯ ದೊರಕಿಸಿಕೊಡುವಂತೆ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕು ಘಟಕದ ಪದಾಧಿಕಾರಿಗಳು ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರಿಗೆ ಮನವಿ ಸಲ್ಲಿಸಿದರು.
ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಗುಲ್ಜಾರ್ ಖಾನ್, ತಾಲೂಕು ಕಾರ್ಯದರ್ಶಿ ಗೌರಮ್ಮ ಅವರ ನೇತೃತ್ವದ ನೌಕರರು ಶುಕ್ರವಾರ ಪಟ್ಟಣದ ಸಂಸದ ಕಚೇರಿಯಲ್ಲಿ ಶಾಸಕ ಡಾ.ರಂಗನಾಥ್ ಅವರನ್ನು ಬೇಟಿಯಾಗಿ ವಿವಿಧ ಬೇಡಿಕೆ ಉಳ್ಳ ಮನವಿ ಪತ್ರವನ್ನು ಸಲ್ಲಿಸಿ ಸರ್ಕಾರದ ಗಮನ ಸೆಳೆದು ಸೌಲಭ್ಯ ಕಲ್ಪಿಸಬೇಕೆಂದು ಕೋರಿದರು.
ಜಿಲ್ಲಾ ಕಾರ್ಯದರ್ಶಿ ಗುಲ್ಜಾರ್ ಖಾನ್ ಮಾತನಾಡಿ ಕೊರೊನಾ ಹಾಗೂ ಲಾಕ್‌ಡೌನ್ ವೇಳೆ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಜೀವದ ಅಂಗು ತೊರೆದು, ರಾಜ್ಯದ 46 ಲಕ್ಷ ಫಲಾನುಭವಿಗಳಿಗೆ ಆಹಾರ ಪದಾರ್ಥಗಳನ್ನು ಮನೆ, ಮನೆಗೆ ತಲುಪಿಸುವಂತ ಕೆಲಸ ಮಾಡಿದ್ದಾರೆ, ಈ ವೇಳೆ ಸೊಂಕಿಗೆ 59 ಮಂದಿ ಕಾರ್ಯಕರ್ತೆಯರು ಮೃತಪಟ್ಟಿದ್ದಾರೆ, ಆದರೆ ಸರ್ಕಾರ ಕಾರ್ಯಕರ್ತೆಯರಿಗೆ ಯಾವುದೇ ರಕ್ಷಣೆ ನೀಡಲಿಲ್ಲ ಎಂದು ಕಿಡಿಕಾರಿದರು,
ಐಸಿಡಿಎಸ್ ಆರು ಉದ್ದೇಶ ಹಾಗೂ ಭಾಗ್ಯಲಕ್ಷ್ಮೀ, ಶ್ರೀಶಕ್ತಿ, ಆರೋಗ್ಯ, ವಿಶೇಷ ಚೇತನರು, ಹಿರಿಯ ಸಬಲೀಕರಣ, ಗ್ರಾಮೀಣಾಭಿವೃದ್ದಿ ಇಲಾಖೆಯ ಕೆಲಸಗಳು ಸೇರಿದಂತೆ ಚುನಾವಣೆ ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇವೆ, ಆದರೆ ಅಂಗನವಾಡಿ ಕಾರ್ಯಕರ್ತೆಯರ ಯಾವುದೇ ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ, ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾನವ ಹಕ್ಕುಗಳ ಆಯೋಗದ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಖಾತರಿ ಪಡಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ, ನೂತನ ಶಿಕ್ಷಣ ನೀತಿಯ ಜಾರಿ ಭಾಗವಾಗಿ ನಾಲ್ಕು ವರ್ಷದ ಮಕ್ಕಳನ್ನು ಶೈಕ್ಷಣಿಕ ವ್ಯವಸ್ಥೆ ಅಡಿಯಲ್ಲಿ ತಂದರೆ ಐಸಿಡಿಎಸ್ ಯೋಜನೆಗೆ ಮಾರಕವಾಗಲಿದೆ, ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಕೊಟ್ಟು ಅಂಗನವಾಗಿ ಕೇಂದ್ರಗಳನ್ನು ಮೇಲ್ದರ್ಜೆಗೆ ಉನ್ನತೀಕರಿಸಲು ಮನವಿ ಮಾಡಿದರು, ಆದರೆ ಸರ್ಕಾರ ಅಂಗನವಾಗಿ ಕೇಂದ್ರಗಳಲ್ಲಿಯೇ ಶಿಶುಪಾಲನ ಕೇಂದ್ರಗಳನ್ನು ಸ್ಥಾಪಿಸುವ ಅವೈಜ್ಞಾನಿಕ ಕ್ರಮಕ್ಕೆ ಮುಂದಾಗಿದೆ ಎಂದು ಟೀಕಿಸಿದರು,
2021-22 ಬಜೆಟ್ ಅನ್ನು ಸೇವಾಜೇಷ್ಠತೆ, ಮಿನಿ ಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಸಹಾಕರಿಗೆ ವೇತನ ಹೆಚ್ಚಳ 2015 ರಿಂದ ನಿವೃತ್ತರಾದ 2166 ಕಾರ್ಯಕರ್ತೆ ಹಾಗೂ ಸಹಾಕರಿಗೆ ಇಡಗಂಟು ಕೊಡಲು 339.48 ಲಕ್ಷವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಶಿಫಾರಸ್ಸ್ ಆಗಿದ್ದರೂ ಕೂಡ ಸರ್ಕಾರ ಒಂದು ರೂಪಾಯಿಯನ್ನು ಹೆಚ್ಚಳ ಮಾಡದೇ ಮಹಿಳಾ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು, ಹೀಗಾಗಿ ಸೆ 13 ರಿಂದ ನಡೆಯುವ ವಿಧಾನಸಭೆ, ರಾಜ್ಯ ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಬಗ್ಗೆ ಚರ್ಚಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿದ ಶಾಸಕ ಡಾ.ಹೆಚ್.ಡಿ.ರಂಗನಾಥ್ ವಿಧಾನ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ನ್ಯಾಯ ದೊರಕಿಸಿಕೊಡುವುದ್ದಾಗಿ ಭರವಸೆ ನೀಡಿದರು,
ಈ ವೇಳೆ ಸಂಘದ ಖಜಾಂಚಿ ಗೀತಾ ಇದ್ದರು.