ಗುಬ್ಬಿ: ಅಪಘಾತದಲ್ಲಿ ಮೃತ ಯುವಕನ ಶವ ಸಾಗಿಸಲು ನಿರಾಕರಿಸಿದ ತರಕಾರಿ ಗೂಡ್ಸ್ ವಾಹನ ಚಾಲಕನ ವಿರುದ್ದ ಸಲ್ಲದ ಪ್ರಕರಣ ದಾಖಲಿಸಿ ಇಡೀ ದಿನ ವಾಹನವನ್ನು ಠಾಣೆಯಲ್ಲಿರಿಸಿಕೊಂಡ ಹಿನ್ನಲೆ ಆಕ್ರೋಶಗೊಂಡ ತರಕಾರಿ ಗೂಡ್ಸ್ ವಾಹನಗಳ ಚಾಲಕರ ಗುಂಪು ತಮ್ಮ ಎಲ್ಲಾ ವಾಹನವನ್ನು ಠಾಣೆ ಮುಂದೆ ನಿಲ್ಲಿಸಿ ತಡರಾತ್ರಿಯಿಂದ ಸತತ 10 ಗಂಟೆಗಳ ಕಾಲ ಗುಬ್ಬಿ ಪೊಲೀಸರ ವಿರುದ್ದ ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆಯಿತು.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕು ಲಿಂಗದಹಳ್ಳಿ ಗ್ರಾಮದ 22 ಗೂಡ್ಸ್ ವಾಹನ ಚಾಲಕರು ಇಡೀ ರಾತ್ರಿ ಗುಬ್ಬಿ ಠಾಣೆ ಮುಂದೆ ಧರಣಿ ಕುಳಿತು ಎಸ್‌ಐ ವಿರುದ್ದ ಕಿಡಿಕಾರಿದರು. ಅಪಘಾತದಲ್ಲಿ ಮೃತ ವ್ಯಕ್ತಿಯ ಶವ ಸಾಗಿಸಲು ನಿರಾಕರಿಸಿದ ಗೂಡ್ಸ್ ವಾಹನ ಚಾಲಕನು ಮತ್ತಷ್ಟು ತರಕಾರಿ ಕೊಂಡೊಯ್ದು ಬೆಂಗಳೂರು ಮಾರುಕಟ್ಟೆಗೆ ಸಾಗಿಸುವ ಕೆಲಸವಿದೆ. ದಯವಿಟ್ಟು ನನ್ನನ್ನು ಬಿಡಿ ಎಂದು ಮನವಿ ಮಾಡಿದರೂ ಸಲ್ಲದ ಪ್ರಕರಣ ಹಾಕಲಾಗಿದೆ. ಕೇವಲ ನೂರು ರೂಗಳ ದಂಡದ ರಸೀದಿ ಹಾಕಿ 7 ಸಾವಿರ ರೂಗಳನ್ನು ಫೋನ್ ಪೇ ಮೂಲಕ ಹಣವನ್ನು ಪಡೆಯಲಾಗಿದೆ ಎಂದು ನೇರ ಆರೋಪ ಮಾಡಿದ ಚಾಲಕರ ತಂಡ ಲಂಚ ಪಡೆದ ನಂತರವೂ ವಾಹನ ಬಿಡಲಿಲ್ಲ ಎಂದು ಕಿಡಿಕಾರಿದರು.
ರೈತರ ತರಕಾರಿಯನ್ನು ಪ್ರತಿ ನಿತ್ಯ ಬೆಂಗಳೂರಿಗೆ ಸಾಗಿಸುವ ಒಟ್ಟು 40 ಗೂಡ್ಸ್ ವಾಹನಗಳು ಇದೇ ಹೆದ್ದಾರಿಯಲ್ಲಿ ಸಂಚರಿಸುತ್ತವೆ. ಎಲ್ಲಾ ವಾಹನಗಳ ದಾಖಲೆ ಪಕ್ಕವಾಗಿದೆ. ಎಲ್ಲಾ ಚಾಲಕರು ತಮ್ಮ ದಾಖಲೆ ಜೊತೆ ಟ್ರಾಫಿಕ್ ನಿಯಮ ಪಾಲಿಸುತ್ತಾರೆ. ಶವ ಸಾಗಿಸಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಒಂದು ವಾಹನವನ್ನು ಠಾಣೆ ಮುಂದೆ ನಿಲ್ಲಿಸಿ ಆ ಚಾಲಕನ ವಿರುದ್ದ ದೌರ್ಜನ್ಯವನ್ನುವೆಸಗಿದ್ದಾರೆ. ಕಾನೂನು ರೀತಿ ನಯವಾಗಿಯೇ ಪ್ರಶ್ನಿಸಿದ ಚಾಲಕನ ವಿರುದ್ದ ಮಾತನಾಡಿದ ಪೊಲೀಸರು ನಿನ್ನ ವಾಹನದಲ್ಲಿ ಮದ್ಯ ಬಾಟಲ್ ಇರಿಸಿ ಜೈಲಿಗೆ ಸೇರಿಸುವ ಬೆದರಿಕೆ ಸಹ ಹಾಕಿರುವುದಾಗಿ ಚಾಲಕ ಯೂನಸ್ ತಿಳಿಸಿದರು. ಗುರುವಾರ ಬೆಳಿಗ್ಗೆ ಚಾಲಕನಿಗೆ ಕೋರ್ಟ್ನಲ್ಲಿ ದಂಡ ಕಟ್ಟಲು ಹೇಳಿ ನೂರು ರೂಗಳ ರಸೀದಿ ಮೊದಲು ಹಾಕಿದರು. ನಂತರ 20 ಸಾವಿರ ರೂಗಳ ಬೇಡಿಕೆ ಇಟ್ಟು ಚಾಲಕನ ಬಳಿ ಇದ್ದ 7 ಸಾವಿರ ರೂಗಳನ್ನು ಫೋನ್ ಪೇ ಮಾಡಿಸಿಕೊಂಡ ಬಗ್ಗೆ ಪ್ರತಿಭಟನಾಕಾರರು ತಿಳಿಸಿ ಸ್ಥಳಕ್ಕೆ ಮೇಲಾಧಿಕಾರಿಗಳು ಬರುವಂತೆ ಆಗ್ರಹಿಸಿದರು.
ಲಕ್ಷಾಂತರ ರೂಗಳ ತರಕಾರಿ ನಿತ್ಯ ಸಾಗಿಸುವ ಈ ಗೂಡ್ಸ್ ವಾಹನಗಳು ಇಡೀ ದಿನ ಠಾಣೆ ಮುಂದೆ ನಿಂತಿರುವ ಕಾರಣ ಈ ದಿನದ ದುಡಿಮೆ ಪೊಲೀಸ್ ಇಲಾಖೆ ಕಟ್ಟಿಕೊಡಬೇಕು ಎಂದು ಆಗ್ರಹಿಸಿದ ಧರಣಿ ಆರಂಭಿಸಿದ ನಂತರ ಫೋನ್ ಪೇ ಮೂಲಕ ಕೊಟ್ಟಿದ್ದ 7 ಸಾವಿರ ರೂ ಹಣವನ್ನು ವಾಪಸ್ ಕಳುಹಿಸಿ ನಂತರ ಕೋರ್ಟ್ಗೆ ದಂಡ ಕಟ್ಟಲು ಸೂಚಿಸಿದ್ದಾರೆ. ಚಾಲಕ ನ್ಯಾಯಾಲಯದಲ್ಲಿ ದಂಡವನ್ನು ಕಟ್ಟಿದ್ದಾರೆ. ಆದರೂ ಲಂಚ ಪಡೆದು ಇಡೀ ದಿನ ನಿಂತ ವಾಹನದ ದುಡಿಮೆ ಮತ್ತು ಚಾಲಕರ ಕೂಲಿ ಯಾರು ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಕೆಲ ಮುಖಂಡರೊAದಿಗೆ ಚರ್ಚಿಸಿ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ಚಾಲಕರಾದ ಮುರುಗೇಶ್, ಅಬ್ಜಲ್‌ಖಾನ್, ಬಾಬು, ರಫೀಕ್, ಮಂಜು, ಶಕೀಲ್ ಇತರರು ಇದ್ದರು.