
ಗುಬ್ಬಿ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮನಸ್ಸಿನಲ್ಲೇನಿದೆ ನನಗೆ ತಿಳಿದಿಲ್ಲ. ಜೆಡಿಎಸ್ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಘೋಷಣೆಯಲ್ಲಿ ನನ್ನ ಹೆಸರು ಬಿಡಬಹುದೇನೋ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದರು.
ತಾಲ್ಲೂಕಿನ ಕಡಬ ಹೋಬಳಿ ಕೋಣನಕೆರೆ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಒಟ್ಟು 84 ಲಕ್ಷ ರೂಗಳಲ್ಲಿ ಮೂರು ಗ್ರಾಮಗಳಲ್ಲಿ ನಿರ್ಮಾಣವಾಗುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿಗೆ ಸಾಂಕೇತಿಕ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಮೊದಲ ಹಂತದ ಪಟ್ಟಿಯಲ್ಲಿ 102 ಮಂದಿ ಅಭ್ಯರ್ಥಿಗಳ ಹೆಸರು ಸಿದ್ದವಿದೆ. ಇವರಿಗೆ ತರಬೇತಿ ನೀಡುವ ಬಗ್ಗೆ ಜೆಡಿಎಸ್ ಪಕ್ಷ ತಯಾರಿ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು ಎಲ್ಲರಿಗೂ ದೇವರು ಒಳ್ಳೆಯದಾಗಲಿ ಎಂದು ಹೇಳಿ ಒಂದೇ ಮಾತಿನಲ್ಲಿ ಉತ್ತರ ನೀಡಿ ಮತ್ತೇನನ್ನೂ ಹೇಳಲು ಸಿದ್ದವಿಲ್ಲ ಎಂದು ಮೌನಕ್ಕೆ ಶರಣಾದರು.
ಶುದ್ದ ಕುಡಿಯುವ ನೀರಿನ ಘಟಕ ದುರಸ್ಥಿ ಬಗ್ಗೆ ಸಾಕಷ್ಟು ದೂರುಗಳಿವೆ. ನಿರ್ಮಾಣ ಮಾಡಿ ನಿರ್ವಹಣೆ ಮಾಡಬೇಕಾದ ಹಲವು ಸಂಸ್ಥೆಗಳು ನಿರ್ಲಕ್ಷ್ಯ ತಾಳಿರುವ ಬಗ್ಗೆ ತಿಳಿದು ಕೂಡಲೇ ಸ್ಥಳೀಯ ಪಂಚಾಯಿತಿಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸೂಚಿಸಿದ್ದೇನೆ. ಎಲ್ಲಾ ಪಂಚಾಯಿತಿ ಅಧಿಕಾರಿಗಳ ಜತೆ ಚರ್ಚಿಸಿ ಶೀಘ್ರದಲ್ಲಿ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಸ್ಥಳೀಯವಾಗಿ ನಿರ್ವಹಿಸಲು ಸೂಚಿಸುವುದಾಗಿ ತಿಳಿಸಿದ ಅವರು ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಬಾಬು ಜಗಜೀವನ್‌ರಾಂ ಭವನ ಕಟ್ಟಡದ ಕೆಲಸ ವಿಳಂಬ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಬಾಕಿ ಇರುವ ಕೆಲಸ ಪೊರೈಸಿ ಭವನ ಸಿದ್ದಗೊಳ್ಳಲಿದೆ ಎಂದರು.
ಗ್ರಾಮೀಣ ಭಾಗದಲ್ಲಿ ನಿರ್ಮಾಣವಾಗುವ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಸದುಪಯೋಗ ಪಡಿಸಿಕೊಂಡು ಮುಂದಿನ ಪೀಳಿಗೆಯ ಎಲ್ಲಾ ಹಂತದ ಬೆಳವಣಿಗೆಗೆ ಸಹಕಾರ ಮಾಡಿಕೊಳ್ಳಬೇಕು. ಸಾಮಾಜಿಕ ಚಟುವಟಿಕೆ ಜತೆಗೆ ಶೈಕ್ಷಣಿಕ ಪ್ರಗತಿಗೆ ಭವನ ಬಳಸಿಕೊಳ್ಳಲು ಕರೆ ನೀಡಿದ ಅವರು ಪಟ್ಟಣದಲ್ಲಿ ಫುಟ್‌ಪಾತ್ ಮೇಲಿನ ಅಂಗಡಿಗಳ ಬಗ್ಗೆ ದೂರು ಬಂದಿದೆ. ಪಾದಚಾರಿಗಳಿಗೆ ತೊಂದರೆಯಾಗುವುದಾದಲ್ಲಿ ಅಂಗಡಿ ತೆರವು ಮಾಡಲಾಗುವುದು. ಆದರೆ ಎಲ್ಲಾ ಅಂಗಡಿಗಳಿಗೆ ಒಂದೇ ಮಾನದಂಡ ಬಳಸಲಾಗದು. ಅವರ ಹೊಟ್ಟೆಪಾಡಿನ ವಿಚಾರವಾಗಿದ್ದು ಮಾನವೀಯ ಗುಣ ಪ್ರದರ್ಶನ ಮಾಡಬೇಕಿದೆ. ಈ ಬಗ್ಗೆ ಅಧಿಕಾರಿಗಳೊಟ್ಟಿಗೆ ಚರ್ಚಿಸಲಾಗುವುದು ಎಂದರು.
ಪ್ರಧಾನಮಂತ್ರಿ ಮೋದಿ ಅವರು ಉದ್ಘಾಟಿಸಿದ ಫುಡ್‌ಪಾರ್ಕ್ ಈವರೆವಿಗೂ ಕೆಲಸ ಆರಂಭಿಸಿಲ್ಲ. ಪ್ರಪಂಚದಲ್ಲೇ ಖ್ಯಾತಿಗೊಳ್ಳುವ ಪಾರ್ಕ್ ಎಂದು ಹೇಳಿ ಭೂ ಮಾಫಿಯಾ ಮಾಡಲಾಗಿದೆ.
ಕೇವಲ ಒಂಡೆರಡು ಲಕ್ಷ ರೂಗಳಿಗೆ ರೈತರ ಜಮೀನು ಪಡೆದು ಇಂದು ಲಕ್ಷಾಂತರ ರೂಗಳಲ್ಲಿ ಮಾರಾಟ ಮಾಡುತ್ತಿರುವ ರಿಯಲ್ ಎಸ್ಟೇಟ್ ದಂಧೆ ಸರ್ಕಾರವೇ ನಡೆಸಿರುವುದು ವಿಪರ್ಯಾಸ ಎಂದು ಟೀಕಿಸಿದ ಅವರು ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಭಿವೃದ್ದಿ ಬಗ್ಗೆ ಸಚಿವ ನಿರಾಣಿ ಮಾಡುವ ಕೆಲಸವನ್ನು ಕಾದು ನೋಡಬೇಕಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಈ ವಲಯವು ವ್ಯಾಪಾರಸ್ಥರಿಗೆ ಮೂಲವಾಗದಂತೆ ನೋಡಿಕೊಂಡು ಉದ್ಯೋಗ ಸೃಷ್ಟಿ ಮಾಡುವ ಕೈಗಾರಿಕ ವಲಯವಾಗಲಿ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಪಟೇಲ್ ದೇವರಾಜ್, ಪಣಗಾರ್ ವೆಂಕಟೇಶ್, ರಮೇಶ್, ಹರ್ಷ, ಕೆ.ಆರ್.ವೆಂಕಟೇಶ್, ಮಂಜು, ರಾಮಣ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮಣ್ಣ, ನಿರ್ಮಿತಿ ಎಇಇ ಕೃಷ್ಣ, ರಾಜಶೇಖರ್ ಇತರರಿದ್ದರು.