ಶಿರಾ: ಇಂದಿಗೂ ಕಾಡುಗೊಲ್ಲ ಸಮುದಾಯದಲ್ಲಿ ಋತುಮತಿಯಾದರೆ, ಹೆರಿಗೆಯಾದರೆ ಹೊರಗೆ ಇರುವಂತಹ ಮೌಢ್ಯತೆ ಸಂಪೂರ್ಣ ನಾಶವಾಗಬೇಕಾದರೆ ಮಹಿಳೆಯರು, ಯುವತಿಯರು, ವಿದ್ಯಾರ್ಥಿಗಳು ಸುಶಿಕ್ಷಿತರಾಗಿ ಮತ್ತು ಜಾಗೃತರಾಗಿ ಮೌಢ್ಯವನ್ನು ತೊಡೆದು ಹಾಕಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರೂ ಹಾಗೂ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಸಿ.ಶಿವುಯಾದವ್ ಹೇಳಿದರು.
ತಾಲ್ಲೂಕಿನ ಭುವನಹಳ್ಳಿ ಗೊಲ್ಲರಹಟ್ಟಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕೃಷ್ಣ ಜಯಂತಿ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮೌಢ್ಯವನ್ನು ತಡೆಯಬೇಕಾದರೆ ನಮ್ಮ ಮಕ್ಕಳು ಸುಶಿಕ್ಷಿತರಾಗಬೇಕು. ನಾವು ಆಸ್ತಿಯನ್ನು ಮಾಡುವ ಬದಲು ಮಕ್ಕಳನ್ನೇ ಆಸ್ತಿ ಮಾಡಬೇಕು ಎಂದರು.
ಭಗವಾನ್ ಶ್ರೀ ಕೃಷ್ಣನ ಜತೆಗೆ ನಮ್ಮೊಂದಿಗೆ ಇದ್ದ ಸಾಂಸ್ಕೃತಿಕ ವೀರರಾದ ಚಿತ್ರಲಿಂಗ, ಕಾಟಮಲಿಂಗ, ಕ್ಯಾತಲಿಂಗ, ಪಾರ್ಥಲಿಂಗ, ಎತ್ತಪ್ಪ, ಜುಂಜಪ್ಪ, ಈರಣ್ಣ ಮತ್ತು ಈರಗಾರರನ್ನು ಪೂಜಿಸಿ ಆರಾಧಿಸಬೇಕು ಎಂದರು.
ಕೃಷ್ಣಜಯAತಿಯನ್ನು ಕೇವಲ ಗೊಲ್ಲರಷ್ಟೇ ಆಚರಿಸಿದರೆ ಸಾಲದು ಸರ್ವರೂ ಭಾಗಿಯಾಗಬೇಕು ಎಂಬ ಮಾತಿನಂತೆ ಭುವನಹಳ್ಳಿ ಮಾದರಿಯಾಗಿದೆ.
ಇಲ್ಲಿ ಗೊಲ್ಲರೊಂದಿಗೆ, ಕುರುಬರು, ನಾಯಕರು, ಕುಂಚಿಟಿಗ ಒಕ್ಕಲಿಗರು ಎಲ್ಲರೂ ಉಪಸ್ಥಿತರಿರುವುದು ಈ ಜಯಂತಿಯನ್ನು ಅರ್ಥಪೂರ್ಣವಾಗಿಸಿದೆ ಎಂದರು.
ಕೃಷ್ಣ ಜಯಂತಿಯನ್ನು ಸರ್ಕಾರದ ಅಧಿಕೃತ ಕಾರ್ಯಕ್ರಮವನ್ನಾಗಿ ಆದೇಶ ಮಾಡಿದ್ದು, ಕಾಡುಗೊಲ್ಲರ ಮಹಿಳೆಯನ್ನು ಎಂ.ಎಲ್.ಸಿ ಮಾಡಿದ್ದು, ಕಾಡುಗೊಲ್ಲರನ್ನು ಎಸ್ .ಟಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದರು.
ಕರ್ನಾಟಕ ಬುಡಕಟ್ಟು ಪರಿಷತ್ತು ಅಧ್ಯಕ್ಷರಾದ ಮಾಲತೇಶ್ ಅರಸ್ ಹರ್ತಿಕೋಟೆ ಮಾತನಾಡಿ, ಕೃಷ್ಣನನ್ನು ನಾವು ಬಾಲ್ಯದಲ್ಲಿ ಹೆಚ್ಚು ನೋಡಿದ್ದೇವೆ. ಬಾಲಲೀಲೆಯ ಮೂಲಕ ಕೃಷ್ಣ ಪರಮಾತ್ಮ ಎಲ್ಲರ ಮನೆಯಲ್ಲಿ ನೆಲೆಸಿದ್ದಾನೆ. ಆಧುನಿಕತೆಯ ಭರಾಟೆಯಲ್ಲಿ ನಾವು ಸಿಲುಕಿಕೊಂಡು ಕೃಷ್ಣನ ಆದರ್ಶಗಳನ್ನು, ಧರ್ಮದ ಉಪದೇಶವನ್ನು ಮರೆತಿದ್ದೇವೆ. ಅದನ್ನು ನಿತ್ಯವೂ ಪಾಲಿಸಬೇಕು ಎಂದರು.
ಯಾದವ ಗೊಲ್ಲರ ಕುಲದಲ್ಲಿ ಜನಿಸಿದ ಕೃಷ್ಣನನ್ನು ಗೊಲ್ಲರು ವರ್ಷಕ್ಕೊಮ್ಮೆ ಮಾತ್ರ ಜಯಂತೋತ್ಸವದ ಮೂಲಕ ನೆನಪಿಸಿಕೊಳ್ಳುತ್ತಾರೆ. ಆದರೆ ಉಡುಪಿಯಲ್ಲಿ ಮತ್ತು ಬೆಂಗಳೂರು ಇಸ್ಕಾನ್ ಮಂದಿರದಲ್ಲಿ ನಿತ್ಯ ಕೃಷ್ಣನನ್ನು ಆರಾಧಿಸುತ್ತಾರೆ. ಅವರಂತೆ ನಾವು ನಿತ್ಯ ಕೃಷ್ಣ ಪ್ರೇಮಿಗಳಾಗಬೇಕು ಎಂದರು.
ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಬಂಡಿರಾಮಕೃಷ್ಣಪ್ಪ ಮಾತನಾಡಿ, ಈ ಹಿಂದೆ ಮೌಢ್ಯವನ್ನು ತೊಲಗಿಸಲು ಮಾಜಿ ಸಂಸದ ಕೋದಂಡರಾಮಯ್ಯ ನವರು ಅವಿರತ ಶ್ರಮವಹಿಸಿದ್ದರು, ಆದರೂ ಮೌಢ್ಯ ಮುಂದುವರೆದಿರುವುದು ವಿಷಾದನೀಯ ಎಂದರು.
ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಶಿರಾ ತಾಲೂಕಿನ ಅಧ್ಯಕ್ಷರಾದ ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ . ತಿಮ್ಮಯ್ಯ ಮ್ಯಾಕಲೂರಹಳ್ಳಿ, ಶಿರಾ ತಾಲ್ಲೂಕಿನ ಪ್ರಧಾನ ಕಾರ್ಯದರ್ಶಿ ದೇವರಾಜ್ ,ಮುಖಂಡರಾದ ಭುವನಹಳ್ಳಿ ಕಿಟ್ಟಿ, ಚಂಗಾವರ ಮಾರಣ್ಣ, ನರೇಶ್ ಗೌಡ ಬಿ .ಎಂ, ದಯಾನಂದ, ನಾರಾಯಣ್, ಜನಾರ್ಧನ್ , ಬೊಪ್ಪರಾಯಪ್ಪ, ಪ್ರಕಾಶ್, ರಾಜಣ್ಣ ಗುತ್ತಿಗೆದಾರರು, ನಾಗಭೂಷಣ್ ನಿಂಗಣ್ಣ, ಕ್ರಿಷ್ಣ ಮೂರ್ತಿ, ನಾಗೇಂದ್ರ,ಹಾರೊಗೆರೆ ಮಹೇಶ್ , ಗಿರೀಶ್ ಸಿದ್ದಣ್ಣ ಸೇರಿದಂತೆ ಇತರರಿದ್ದರು.