ಶಿರಾ: ಅಸಂಘಟಿತ ಕೂಲಿ ಕಾರ್ಮಿಕರಿಗೆ ಕೊರೋನಾ ಕಾರಣದಿಂದ ಸಂಕಷ್ಟ ಉಂಟಾಗಿತ್ತು. ಈ ನಿಟ್ಟಿನಲ್ಲಿ ಸರಕಾರ ಅಸಂಘಟಿತ ಕಾರ್ಮಿಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ಆಹಾರ ಕಿಟ್‌ಗಳನ್ನು ನೀಡಿರುವುದು ಜನಪರ ಕಾರ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಹೇಳಿದರು.
ಅವರು ತಾಲೂಕಿನ ನಾದೂರು ಮತ್ತು ಮಾಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ೪೦೦ ಜನ ಕಾರ್ಮಿಕರಿಗೆ ಬುಧವಾರ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಕಿಟ್ ವಿತರಣೆ ಮಾಡಿ ಮಾತನಾಡಿದರು. ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಯಡಿ ಕಾರ್ಮಿಕ ಇಲಾಖೆ ನೀಡುವಂತಹ ೨ ಸಾವಿರ ಕಿಟ್‌ಗಳನ್ನು ಬಡವರಿಗೆ ನೀಡುತ್ತಿದ್ದು ಇಂತ ಜನಪರ ಸೇವೆಗಳ ಹೆಚ್ಚು ಸಂತೋಷ ನೀಡುತ್ತವೆ ಎಂದ ಅವರು ಕೊರೋನಾ ರಾಜ್ಯದಲ್ಲಿ ದೊಡ್ಡ ಸಂಕಷ್ಟ ತಂದಿದ್ದು ಕೋವಿಡ್‌ನಿಂದ ತಂದೆ-ತಾಯಿ ಮೃತ ಪಟ್ಟಿದ್ದರು ಅಂತಹ ಮಕ್ಕಳಿಗೆ ೧ ರಿಂದ ೧೨ ನೇ ತರಗತಿವರೆಗೆ ಉಚಿತ ಶಿಕ್ಷಣ ಕೊಡಿಸ ಬೇಕೆಂಬ ಮಹತ್ವ ನಿರ್ಧಾರ ಕೈಗೊಂಡಿದ್ದೇನೆ, ಅಂತಹ ವಿದ್ಯಾರ್ಥಿಗಳು ನನ್ನನು ಸಂಪರ್ಕಿಸಿ ಎಂದು ತಿಳಿಸಿದರು.
ಮದಲೂರು ಕೆರೆಗೆ ಹೇಮೆ ಹರಿಯಲಿದೆ : ಜಿಲ್ಲೆಯಲ್ಲಿ ಹೆಚ್ಚು ಚರ್ಚೆಯಲ್ಲಿ ಮದಲೂರು ಕೆರೆ ವಿಚಾರವಾಗಿ ಪ್ರತಿ ಪಕ್ಷದ ಮಾಜಿ ಸಚಿವರು ವ್ಯರ್ಥ ಕಸರತ್ತು ಮಾಡುತ್ತಿದ್ದು, ಜನರನ್ನು ದಾರಿ ತಪ್ಪಿಸುವಂತ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ನವಂಬರ್ ತಿಂಗಳಲ್ಲಿ ಬಿಜೆಪಿ ಸರಕಾರ ಕೊಟ್ಟ ಮಾತಿನಂತೆ ೬೦ ದಿನಗಳ ಕಾಲ ನೀರು ಹರಿಸಿತ್ತು ಇದರಿಂದ ನೂರಾರು ಹಳ್ಳಿಗಳ ಅಂತರ್ಜಲ ಮಟ್ಟ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ನಿಗಿತ್ತು. ಇಷ್ಟಿದ್ದರು ಮದಲೂರು ಕೆರೆಗೆ ನೀರು ಬಿಡಲಿಲ್ಲ ಎಂಬ ಆರೋಪ ಸರಿಯಲ್ಲ, ಕ್ಷೇತ್ರದ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮತ್ತು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಲ್ಲಿ ಮನವಿ ಮಾಡಿದ್ದು ಕಳೆದ ವರ್ಷದಂತೆ ಈ ವರ್ಷವೂ ಮದಲೂರು ಕೆರೆಗೆ ಹೇಮಾವತಿ ನೀರು ಹರಿಯಲಿದೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.