ತುಮಕೂರು:ವ್ಯಕ್ತಿ ಯಾವುದೇ ವೃತ್ತಿ ಮತ್ತು ಹುದ್ದೆಯಲ್ಲಿರಲಿ,ಅದಕ್ಕೆ ಪೂರಕವಾದ ಜ್ಞಾನವನ್ನು ಆಗಿಂದಾಗ್ಗೆ ಪಡೆದುಕೊಳ್ಳುವುದು ಉತ್ತಮ ಕೆಲಸಗಾರರ ಎನಿಸಿಕೊಳ್ಳಲು ಸಹಕಾರಿಯಾಗುತ್ತದೆ.ಈ ನಿಟ್ಟಿನಲ್ಲಿ ಪಶುವೈದ್ಯಕೀಯ ಇಲಾಖೆ ಹಾಗೂ ಪಶುವೈದ್ಯಕೀಯ ಸಂಘ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ.
ನಗರದ ಎಸ್.ಎಸ್.ಐ.ಟಿ ಎಂ.ಬಿ.ಎ ಸಭಾಂಗಣದಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘ(ರಿ) ಹಾಗೂ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯೋಜಿಸಿದ್ದ ತಾಂತ್ರಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಪ್ರತಿಯೊಬ್ಬರು ಅಪ್‌ಡೇಟೆಡ್ ಆದರೆ ಮಾತ್ರ ಕೆಲಸವನ್ನು ಸುಸೂತ್ರವಾಗಿ ನಿರ್ವಹಿಸಬಹುದು.ಒಟ್‌ಡೇಟೆಡ್ ವ್ಯಕ್ತಿಗೆ ಸಮಾಜದಲ್ಲಿ ಬೆಲೆ ಇಲ್ಲ.ವೃತ್ತಿಯಲ್ಲಿ ತಾಂತ್ರಿಕ ನೈಪುಣ್ಯತೆ ಹೆಚ್ಚಾದರೆ ಜನಮನ್ನಣೆ ತಾನಾಗಿಯೇ ಲಭಿಸುತ್ತದೆ.ಇದು ಎಲ್ಲಾ ವೃತ್ತಿಗಳಿಗೂ ಅನ್ವಯಿಸುತ್ತದೆ ಎಂದರು.
ತಮ್ಮ ನೋವು, ನಲಿವುಗಳನ್ನು ಹೇಳಿಕೊಳ್ಳಲಾಗದ ಮೂಕ ಪ್ರಾಣಿಗಳ ಸೇವೆ ಮಾಡುವ ಪಶುವೈದ್ಯರ ಸೇವೆಗೆ ಸರಕಾರದ ಜೊತೆಗೆ,ಜನರಿಂದಲೂ ಗೌರವ ಸಿಗುವಂತಾಗಬೇಕು.ಕಳೆದ ೧೦ ವರ್ಷಗಳಿಗೆ ಹೊಲಿಕೆ ಮಾಡಿದರೆ, ಪಶುವೈದ್ಯರಿಂದ ವರ್ಷದಿಂದ ವರ್ಷಕ್ಕೆ ಗೌರವ ಹೆಚ್ಚುತ್ತಿದೆ.ನಿಮ್ಮನ್ನು ಕಾಣುವ ರೀತಿಯೇ ಬದಲಾಗಿದೆ.ತಮ್ಮ ವೇದನೆಯನ್ನು ಹೇಳಿಕೊಳ್ಳ ಲಾಗದ ಜೀವಿಗಳ ಭಾವನೆಗಳನ್ನು ಅರ್ಥ ಮಾಡಿಕೊಂಡು ಚಿಕಿತ್ಸೆ ನೀಡಿ,ಅವುಗಳು ಚೇತರಿಸಿಕೊಂಡಾಗ, ಮೂಕ ಪ್ರಾಣಿಗಳು ವ್ಯಕ್ತಪಡಿಸುವ ಆನಂದವನ್ನು ಅರ್ಥೈಸುವ ಶಕ್ತಿ ನಿಮಗಿದೆ.ಇದಕ್ಕಿಂತ ಜನಮನ್ನಣೆ ಮತ್ತೊಂದಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ನುಡಿದರು.
ನಾನು ದ್ವಿತೀಯ ಪಿಯುಸಿಯವರೆಗೆ ಎಮ್ಮೆಗಳನ್ನು ಸಾಕಿದ್ದೇನೆ.ನಮ್ಮ ಅಜ್ಜಿ ಎಮ್ಮೆ, ದನ,ಕರುಗಳನ್ನು ಸಾಕಿದವ ಎಂದಿಗೂ ಹಾಳಾಗುವುದಿಲ್ಲ ಎಂದು, ನನ್ನ ಪಾಲಿಗೆ ಅದು ನಿಜ.ನಿಮ್ಮ ನಿಸ್ವಾರ್ಥ ಸೇವೆಗೆ ಇಂದಲ್ಲ,ನಾಳೆ ಗೌರವ ಸಮಾಜದಿಂದ, ಸರಕಾರದಿಂದ ಲಭಿಸಲಿದೆ.ಮನುಷ್ಯರ ವೈದ್ಯರು,ಪ್ರಾಣಿಗಳ ವೈದ್ಯರು ಎಂಬ ಕೀಳಿರಿಮೆ ಬೇಡ.ಪ್ರಾಣಿಗಳ ಸೇವೆ ಮಾಡುವುದು ಎಲ್ಲಕ್ಕಿಂತಲೂ ಶ್ರೇಷ್ಠ ಎಂಬುದು ನನ್ನ ಭಾವನೆ.ಶಿರಾ ತಾಲೂಕಿನಲ್ಲಿ ಗೋಶಾಲೆ ನಿರ್ಮಾಣಕ್ಕೆ ಜಾಗ ಸೇರಿದಂತೆ ನಿಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಜಿ.ವಿ.ಜಯಣ್ಣ ಮಾತನಾಡಿ,ಜಿಲ್ಲೆಯಲ್ಲಿ ೨೫೦ ಪಶುವೈದ್ಯಕೀಯ ಸಂಸ್ಥೆಗಳಿದ್ದು,ಜಿಲ್ಲೆಗೆ ೯೯೪ ಪಶುವೈದ್ಯರ ಹುದ್ದೆಗಳಿದ್ದರೂ ಕಾರ್ಯನಿರ್ವಹಿಸುತ್ತಿರುವುದು ೫೪೦ ಜನ ಮಾತ್ರ. ಶೇ೫೦ರಷ್ಟು ಹುದ್ದೆಗಳು ಖಾಲಿ ಇದ್ದರೂ ಕೋರೋನದಂತಹ ಸಂದರ್ಭ ದಲ್ಲಿಯೂ ಬಹಳ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಕಾಲ ಕಾಲಕ್ಕೆ ಜಾನುವಾರುಗಳಿಗೆ ಬರುವ ರೋಗಗಳಿಗೆ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದೆ.ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-೨೦೨೦ರ ಅನ್ವಯ ಜಿಲ್ಲೆಗೊಂದು ಗೋಶಾಲೆ ತೆರೆಯಬೇಕಿದೆ. ಶಿರಾದ ಚಿಕ್ಕಬಾಣಗೆರೆ ಬಳಿ ೧೯ ಎಕರೆ ಜಮೀನು ಗುರುತಿಸಿದ್ದು, ಗೋಶಾಲೆ ತೆರೆಯಲು ಸೂಕ್ತವಾಗಿದೆ. ಶೀಘ್ರವಾಗಿ ಮಂಜೂರು ಮಾಡಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ವಿ.ಸಿ.ರುದ್ರಪ್ರಸಾದ್,ಜಿಲ್ಲೆಯಲ್ಲಿ ಪಶುವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಲ್ಲಿ ೬೫ ಜನರು ಸ್ನಾತಕೋತ್ತರ ಪದವಿ ಪಡೆದವರಿದ್ದಾರೆ.೬ಜನ ಶಸ್ತçಚಿಕಿತ್ಸಾ ನಿಪುಣರಿ ದ್ದಾರೆ.ಅವರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಈ ರೀತಿಯ ತಾಂತ್ರಿಕ ವಿಚಾರ ಸಂಕಿರಣದ ಮೂಲಕ ಹೊಸ ಜ್ಞಾನವನ್ನು ತಿಳಿಸುವ ಕೆಲಸ ಮಾಡಲಾಗುತ್ತಿದೆ.ಇದರ ಫಲವಾಗಿ ಅಸಾಧ್ಯವೆನಿಸುವ ಪ್ರಕರಣಗಳಲ್ಲಿ ತಮ್ಮ ಅನುಭವವನ್ನು ಬಳಸಿ ಕೊಂಡು ಶಸ್ತçಚಿಕಿತ್ಸೆ ನಡೆಸಿ,ಪಶುಗಳ ಜೀವ ರಕ್ಷಿಸಿದ್ದಾರೆ.ಆದರೆ ಸಮಾಜವಾಗಲಿ, ಜಿಲ್ಲಾಡಳಿತವಾಗಲಿ ನಮ್ಮನ್ನು ಗುರುತಿ ಸುತ್ತಿಲ್ಲ ಎಂಬ ಬೇಸರ ನಮ್ಮನ್ನು ಕಾಡುತ್ತಿದೆ. ಕೋರೋನದಂತಹ ಸಂದರ್ಭದಲ್ಲಿಯೂ ಪಶುವೈದ್ಯರು ತಮ್ಮ ಜೀವದ ಹಂಗು ತೊರೆದು ರೈತರ ಮನೆ ಬಾಗಿಲಿಗೆ ಹೋಗಿ ಸೇವೆ ಒದಗಿಸಿದ್ದಾರೆ.ನಗರದ ಶಿರಾ ಗೇಟ್‌ನಲ್ಲಿ ಮೆಲ್ಟಿ ಸೆಷಾಲಿಟಿ ಪಶು ಆಸ್ಪತ್ರೆ ಸಿದ್ದಗೊಂಡಿದ್ದು,ಉದ್ಘಾಟನೆಯಾದರೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ವೇದಿಕೆಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಪರ ನಿರ್ದೇಶಕ ಡಾ.ಜೆ.ಪಂಪಾಪತಿ, ಹಿರಿಯ ಪಶುವೈದ್ಯಾಧಿಕಾರಿ ಡಾ.ಎಸ್.ಪಿ. ಮಂಜುನಾಥ್ ಇವರುಗಳು ಕರ್ನಾಟಕ ಜಾನುವಾರು ಪ್ರತಿಬಂದಕ ಮತ್ತು ಸಂರಕ್ಷನಾ ವಿಧೇಯಕ-೨೦೨೦ ಹಾಗು ಜಾನುವಾರುಗಳಲ್ಲಿ ಪೋಷಕಾಂಶಗಳ ಕೊರತೆ ಮತ್ತು ನಿರ್ವಹಣೆ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಆರ್.ಎಂ. ನಾಗಭೂಷಣ್,ಉಪಾಧ್ಯಕ್ಷ ಡಾ.ಎ.ಸಿ.ದಿವಾಕರ್,ಜಂಟಿ ಕಾರ್ಯದರ್ಶಿ ಡಾ.ಮಹದೇವಯ್ಯ, ಖಜಾಂಚಿ ಡಾ.ಬಿ.ಆರ್. ನಂಜೇಗೌಡ, ಮಹಿಳಾ ಪ್ರತಿನಿಧಿ ಡಾ.ಶಶಿಕಲ ಹೆಚ್. ಮತ್ತಿತರರು ಉಪಸ್ಥಿತರಿದ್ದರು.